• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಭಾವ ಭಿತ್ತಿ

    ಕಂಬನಿಯೊಂದಿಗೆ ಕಾಡುವ ನೆನಪೇ ’ಶಕುಂತಲೆ’

    September 15th, 2008.


    ಬೆಂಗಳೂರಿನ ಮೆಜೆಸ್ಟಿಕ್ ಸಿಟಿ ಬಸ್ ನಿಲ್ದಾಣ. ರಾತ್ರಿ ೧೦.೪೦ ರ ಸಮಯ. ಯಾವುದೋ ಕಾರ್ಯನಿಮಿತ್ತ ತೆರಳಿದ್ದವನು ಮನೆಗೆ ಮರಳಲು ಬಸ್‌ಗಾಗಿ ಕಾಯುತ್ತಿದ್ದೆ. ರಾತ್ರಿ ೧೦ ರ ನಂತರ ಮೆಜೆಸ್ಟಿಕ್‌ನಲ್ಲಿ ಓಡಾಡುವುದು ಅಷ್ಟೇನೂ ಸುರಕ್ಷಿತವಲ್ಲ. ಅದರಲ್ಲೂ ಮಹಿಳೆಯರಾದರೆ ಅದು ಅಪಾಯಕಾರಿ ಪ್ರದೇಶವೇ. ಇಡೀ ಮೆಜೆಸ್ಟಿಕ್ ಒಂದು ’ಕೆಂಪು ದೀಪದ ಪ್ರದೇಶ’ವೇನೋ ಎಂಬ ಅನುಭವವಾಗುತ್ತದೆ. ಅದರಲ್ಲೂ ರಾತ್ರಿ ೮ ರ ನಂತರ ಮೆಜೆಸ್ಟಿಕ್‌ನ ಸುರಂಗ ಮಾರ್ಗಗಳಲ್ಲಿ ಓಡಾಡಿದರೆ ಅತ್ಯಂತ ಅಪಾಯಕಾರಿ ಅನುಭವಗಳಾಗುತ್ತವೆ. ಅಂತಹ ಹೊತ್ತಿನಲ್ಲಿ ನನ್ನಿಂದ ಸ್ವಲ್ಪ ದೂರದಲ್ಲಿ ಹುಡುಗಿಯೊಬ್ಬಳು ಬಸ್‌ಗಾಗಿ ಕಾಯುತ್ತ (?) ನಿಂತಿದ್ದಳು. ಆ ಪ್ರದೇಶದಲ್ಲಿ ಅಲ್ಲಲ್ಲಿ ಹುಡುಗಿಯರು, ಹೆಂಗಸರು ಯಾರನ್ನೋ ಆಕರ್ಷಿಸಲು ನಿಂತಿರುವುದು ಸಾಮಾನ್ಯವಾದರೂ ಈ ಹುಡುಗಿಯನ್ನು ನೋಡಿದಾಗ ನನಗೆ ಆಕೆ ’ಅದಕ್ಕಾಗಿ’ ನಿಂತಿದ್ದಾಳೆ ಅನ್ನಿಸಲಿಲ್ಲ. ಅವಳ ವೇಷ, ಭೂಷಣ ಹಾವ-ಭಾವ ಆಕೆ ಸಭ್ಯಳು ಅನ್ನಿಸುವಂತಿತ್ತು. ಯಾರನ್ನೋ ಆಕರ್ಷಿಸುವ ಇರಾವೆ ಆಕೆಗೆ ಇದ್ದಂತಿರಲಿಲ್ಲ. ಆದರೆ ಅದಾಗಲೇ ನಾಲ್ಕೈದು ಮಂದಿ ಗಂಡಸರು ಆಕೆಯ ಸುತ್ತ ಸುಳಿಯತೊಡಗಿದ್ದರು. ಪದೇ ಪದೇ ಆಕೆಯ ಸುತ್ತ ಸುತ್ತುತ್ತ ಆ ಹುಡುಗಿಯನ್ನು ಸೆಳೆವ ಪ್ರಯತ್ನ ಮಾಡುತ್ತಿದ್ದರು.

    ಆ ಹುಡುಗಿ ತೀವ್ರ ಭಯಕ್ಕೆ ಒಳಗಾದಂತೆ ಕಾಣುತ್ತಿತ್ತು. ಯಾರಾದರೂ ಸಹಾಯ ಮಾಡುತ್ತಾರೇನೋ ಎಂಬ ನಿರೀಕ್ಷೆ, ಚಡಪಡಿಕೆ, ಉದ್ವೇಗ ಆಕೆಯಲ್ಲಿದ್ದಂತೆ ತೋರುತ್ತಿತ್ತು. ಆಕೆಗೆ ಏನನ್ನಿಸಿತೋ ಅವಳು ನಿಧಾನವಾಗಿ ನನ್ನ ಬಳಿಗೆ ಬಂದು ನಿಂತಳು. ಅಷ್ಟರಲ್ಲಿ ಪೋಲಿಸ್ ಪೇದೆ ಬಂದ ಸದ್ದಾದ್ದರಿಂದ ಅವಳ ಸುತ್ತಲಿದ್ದ ಕೆಲವು ಗಂಡಸರು ಪರಾರಿಯಾದರು. ’ಯಾಕಮ್ಮಾ ಇಂತಹ ಹೊತ್ತಿನಲ್ಲಿ ಒಬ್ಬಳೇ ಇಲ್ಲಿಗೆ ಬರೋಕೆ ಹೋದೆ?’ ಅಂತ ನಾನವಳನ್ನು ಪ್ರಶ್ನಿಸಿದೆ. ಆ ಹುಡುಗಿ ಸ್ವಲ್ಪ ಧೈರ್ಯ ಬಂದವಳಂತೆ ಕಷ್ಟಪಟ್ಟು ಮಾತನಾಡಿದಳು. ’ಇಲ್ಲ ಸರ್, ನೆಲಮಂಗಲಕ್ಕೆ ಹೋಗಿದ್ದೆ. ಬರುವಾಗ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡು ಇಷ್ಟೂತ್ತಾಗಿಬಿಡ್ತು, ಮನೆ ಚಾಮರಾಜಪೇಟೆಯಲ್ಲಿ. ಅದಕ್ಕೇ ಕಾಯ್ತಿದೀನಿ’ ಅಂದಳು ಸಣ್ಣದಾಗಿ. ’ನಾನೂ ಆ ಕಡೆ ಹೋಗ್ತಿದೀನಿ, ಬರುತ್ತೆ ಬಿಡಿ ಬಸ್ಸು’ ಅಂದೆ. ೨ ನಿಮಿಷ ಸುಮ್ಮನಿದ್ದವಳು ನಂತರ ’ಸರ್ ನಂಗೊಂದು ಸಹಾಯ ಮಾಡ್ತೀರಾ? ಇಲ್ಲೇ ಹತ್ತಿರ ನನ್ನ ಚಿಕ್ಕಮ್ಮನ ಮನೆ ಇದೆ. ಅಲ್ಲೀವರ್ಗೂ ನನ್ನ ಜತೆ ಬರ್‍ತೀರಾ? ಇಲ್ಲದಿದ್ರೆ ಈ ಜನ ನನ್ನ ಬಿಡಲ್ಲ. ಪ್ಲೀಸ್ ಸರ್, ಸಹಾಯ ಮಾಡಿ, ಐದೇ ನಿಮಿಷ ಅಷ್ಟೆ’ ಅಂತ ಅತ್ಯಂತ ದೀನಳಾಗಿ, ಅಸಹಾಯಕಳಂತೆ ಬೇಡಿದಳು.

    ನನಗೇಕೋ ಮನಸ್ಸಿಗೆ ತಟ್ಟಿದಂತಾಗಿ ’ನಡೀರಿ ಹೋಗೋಣ’ ಅಂದೆ. ನಾವು ನಡೆಯತೊಡಗಿದೆವು. ಮೆಜೆಸ್ಟಿಕ್‌ನಲ್ಲಿ ರಾತ್ರಿ ೧೦ರ ನಂತರ ಒಬ್ಬಳು ಹುಡುಗಿಯ ಜತೆ ಹಾಗೆ ನಡೆಯೋದು ಯಾರಾದರೂ ಪರಿಚಿತರು ನೋಡಿದರೆ ಏನೆಂದುಕೊಂಡುಬಿಡ್ತಾರೋ? ಅನ್ನೋ ಅಳುಕು ಕಾಡತೊಡಗಿತು. ಒಬ್ಬರಿಗೆ ನಮ್ಮಿಂದ ಸಹಾಯ ಆಗೋದಾದ್ರೆ ಯಾರಿಗಾದ್ರೂ ಯಾಕೆ ಹೆದರಬೇಕು? ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆಕೆ ತನ್ನಷ್ಟಕ್ಕೆ ಮಾತಿಗಿಳಿದಳು. ’ನನ್ನ ಹೆಸರು ಶಕುಂತಲಾ ಅಂತ ಸರ್, ಡಿಗ್ರಿ ಮುಗಿಸಿದೀನಿ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದೀನಿ. ಊರು ವಿಜಾಪುರ. ನನ್ನ ತಂದೆ ಕುಡಿದು ಕುಡಿದು ಸತ್ತುಹೋದ. ತಾಯಿ ಹೂ ಮಾರ್‍ತಾಳೆ. ತಮ್ಮ ಗ್ಯಾರೇಜ್‌ನಲ್ಲಿ ಕೆಲಸ ಮಾಡ್ತಾನೆ. ನಾನು ದುಡಿದ್ರೆ ಸರ್ ನಮ್ಮೆಲ್ಲರ ಹೊಟ್ಟೆ ತುಂಬೋದು’ ಆಕೆಯ ದನಿಯಲ್ಲಿ ದೈನ್ಯತೆಯಿತ್ತು. ನನ್ನೊಳಗೆ ’ತಪ್ಪು ಮಾಡ್ತಿದೀನಾ’ ಎಂಬ ಭಯ ಕಾಡತೊಡಗಿತ್ತು. ಸ್ವಲ್ಪ ನಡೆದ ಮೇಲೆ ಒಂದು ಗಲ್ಲಿಯೊಳಗೆ ಆಕೆ ಹೆಜ್ಜೆ ಹಾಕತೊಡಗಿದಳು. ನನಗಂತೂ ಪ್ರತಿ ಹೆಜ್ಜೆ ಭಾರವೆನಿಸತೊಡಗಿತ್ತು. ಸ್ವಲ್ಪ ದೂರ ಗಲ್ಲಿ ದಾಟಿದ ತಕ್ಷಣ ಒಂದು ಸರ್ಕಲ್‌ನಂತಹ ಜಾಗ ಬಂದ ಕೂಡಲೇ ಆಕೆ ತಟ್ಟನೆ ಹಿಂದೆ ತಿರುಗಿದಳು. ಮನೆ ಬಂತೇನೋ ಅಂತ ನಾನಂದುಕೊಂಡೆ. ಆ ಹುಡುಗಿಯ ಮುಖದಲ್ಲೀಗ ಭಯವಿ ದ್ದಂತಿರಲಿಲ್ಲ.

    ಆಕೆ ತಟ್ಟನೆ ನನ್ನ ಕೈ ಹಿಡಿದು ಕೊಂಡು ’ನೋಡಿ ಸರ್, ಬೇರೆ ಎಲ್ಲ ಗಂಟೆಗಳ ಲೆಕ್ಕ. ನೀವು ನಂಗೆ ಸಹಾಯ ಮಾಡಿದೀರ. ಅದಕ್ಕೆ ಈವತ್ತು ರಾತ್ರಿ ಪೂರ್ತಿ ಕಳೆಯಬಹುದು. ೬೦೦ ಕೊಡಿ ಸಾಕು, ಒಪ್ಪಿಗೆಯಾಗದಿದ್ರೆ ಇಷ್ಟವಾದಷ್ಟು ಕೊಡಿ. ಆದ್ರೆ ಆಗಲ್ಲ ಅನ್ಬೇಡಿ, ಪ್ಲೀಸ್,’ ಆಕೆ ಶಾಂತವಾಗಿ ಹೇಳಿದಳು. ನಾನು ಬೆಚ್ಚಿಬಿದ್ದೆ. ಇದ್ದಕ್ಕಿದ್ದಂತೆ ಮಾತಿನ ದನಿ, ಧಾಟಿ ಬದಲಾಗಿದ್ದು ಕೇಳಿ ಧಿಗ್ಮೂಡನಾದೆ. ಕಾಲುಗಳಲ್ಲಿ ನಡುಕ. ಆದರೂ ಹೇಗೋ ಕಷ್ಟಪಟ್ಟು ’ಥೂ ನಿನ್ನ, ಮರ್ಯಾದೆ ಇಲ್ವಾ, ನಾಚಿಕೆಯಾಗಲ್ವಾ? ಏನೋ ಪಾಪ, ಸಹಾಯ ಮಾಡೋಣ ಅಂತ ಬಂದರೆ ಈ ತರ ಎಲ್ಲಾ ಮಾತಾಡ್ತೀಯಾ? ನಿನ್ನ ಜತೆ ನಂಬಿ ಬಂದ ತಪ್ಪಿಗೆ ನಾನೇ ಹೊಡ್ಕೊಬೇಕು. ಪೋಲಿಸ್‌ಗೆ ಹೇಳ್ತೀನಿ… ಮೈಮೇಲಿನ ಪರಿವೆಯಿಲ್ಲ ದಂತೆ ಕೂಗಿ, ಆಕೆಯ ಕೈಯನ್ನು ಕಿತ್ತೆಸೆದೆ. ಹೌದು ಸರ್, ನಿಮ್ಮ ಸ್ಥಾನದಲ್ಲಿ ನಾನಿದ್ದಿದ್ರೂ ಹೀಗೇ ಮಾತಾಡ್ತಿದ್ದೆ. ಆದರೆ ಏನ್ಮಾಡಲಿ? ಆ ದರಿದ್ರ ದೇವರು ಈ ಹೆಣ್ಣು ದೇಹವನ್ನು, ಬಡತನವನ್ನು ಒಟ್ಟಿಗೇ ಕೊಟ್ಟಿದ್ದಾನೆ. ಬದುಕಬೇಕಲ್ಲ, ಬಡವರ ಬದುಕು…. ಆಕೆಯ ಕಣ್ಣುಗಳಿಂದ ಕಣ್ಣೀರಿನ ಧಾರೆ ಹರಿಯತೊಡಗಿತು. ಮುಂದೆ ಮಾತನಾಡಲು ಆಕೆಗೆ ಸಾಧ್ಯವಾಗಲಿಲ್ಲ. ಏನನ್ನಿಸಿತ್ತೋ ಆಕೆ ಬಿಕ್ಕಿ ಬಿಕ್ಕಿ ಅಳತೊಡಗಿದ್ದಳು. ಅಷ್ಟು ಹೊತ್ತಿಗೆ ನಾಲ್ಕಾರು ಅದೇ ತರಹದ ಹೆಂಗಸರು ನನ್ನ ಸುತ್ತಮುತ್ತ ಬರತೊಡಗಿದಾಗ ನಾನು ಬೆಚ್ಚಿಬಿದ್ದೆ. ಮೈಯೊಳಗಿನ ಶಕ್ತಿ ಎಲ್ಲವನ್ನೂ ಒಟ್ಟು ಗೂಡಿಸಿ ಎದ್ದೆನೋ, ಬಿದ್ದೆನೋ ಅಂತ ಓಡತೊಡಗಿದೆ. ಯಾವುದೋ ಬಸ್ ಹತ್ತಿ ಮನೆ ಸೇರುವವರೆಗೆ ನಾನು ನಾನಾಗಿರಲಿಲ್ಲ.

    ಇವತ್ತಿಗೂ ಯಾರದದ್ದಾರೂ ಕಣ್ಣೀರು ನೋಡಿದರೆ ನನಗೆ ಶಕುಂತಲೆ ನೆನಪಾಗುತ್ತಾಳೆ. ಅವಳ ಮಾತು, ಬೀದಿ ದೀಪದಡಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅವಳ ಅಸಹಾಯಕತೆ ಎಲ್ಲವೂ ಕಾಡತೊಡಗುತ್ತದೆ. ಈ ದೇಶದಲ್ಲಿ ಅಂತಹ ಅದಿನ್ನೆಷ್ಟು ಅಸಹಾಯಕ ’ಶಕುಂತಲೆ’ ಯರಿದ್ದಾರೋ?

    -ರಾಚಂ

    ಪ್ರತಿಕ್ರಿಯಿಸಿ :