ಆ ತಾಯಿಯ ಕಣ್ಣೀರು ಎಂತವರ ಮನವನ್ನೂ ಕಲುಕುತ್ತಿತ್ತು
September 15th, 2008.
-ಸುಧಾ ಎಂ. ಹೆಗಡೆ, ಸಿದ್ಧಾಪುರ
ಶಿರಸಿಯ ಮುಗ್ಧ ವಿದ್ಯಾರ್ಥಿನಿ ವತ್ಸಲಾ ಹೆಗಡೆ ಕಾಮುಕರ ಕಪಿಮುಷ್ಟಿಗೆ ಸಿಲುಕಿ ದುರಂತ ಸಾವಿಗೀಡಾಗಿದ್ದು ಅತ್ಯಂತ ನೋವಿನ ಸಂಗತಿ. ವತ್ಸಲಾಳನ್ನು ಹತ್ತಿರದಿಂದ ಬಲ್ಲ ಪತ್ರಿಕಾ ಬಳಗದ ಸುಧಾ ಎಂ.ಹೆಗಡೆ ಈ ದುರಂತದ ಕುರಿತು ತಮ್ಮ ಭಾವನೆಗಳನ್ನು ಭಾವಭಿತ್ತಿಯಲ್ಲಿ ಹಂಚಿಕೊಂಡಿದ್ದಾರೆ. ’ನಮ್ಮ ಮಗಳು ಅಪಘಾತದಲ್ಲಿ ಸತ್ತಿದ್ದರೆ ನನಗಿಷ್ಟು ನೋವಾಗುತ್ತಿರಲಿಲ್ಲ. ಇಂತಹ ಕೆಟ್ಟ ಸಾವಿಗೆ ಬಲಿಯಾಗಿದ್ದು ನನ್ನ ಹಿಂಡುತ್ತಿದೆ. ಸಾಯುವಾಗ ಎಷ್ಟು ಹಿಂಸೆ ಪಟ್ಟು ನರಳಿದಳೋ…
’ಯಾವ ಹೆಣ್ಮಕ್ಕಳಿಗೂ ಇಂಥ ಸ್ಥಿತಿ ಬರಬಾರದು’. ನಾಲೈದು ಸಾವಿರದಷ್ಟು ಜನ ಸೇರಿದ ಸಭೆಯಲ್ಲಿ ಮೊನ್ನೆ ಮೊನ್ನೆಯಷ್ಟೆ ಕೊಲೆಯಾದ ವತ್ಸಲಾಳ ತಾಯಿ ಶಶಿಕಲಕ್ಕ ಗದ್ಗದಿತರಾಗಿ ಹೇಳುತ್ತಿದ್ದರೆ ಸಭೆಯಲ್ಲಿ ಸೇರಿದ ಎಲ್ಲ ಜನರ ಕಣ್ಣಲ್ಲೂ ನೀರು ಹರಿಯುತ್ತಿತ್ತು. ತಮ್ಮ ಮನೆಯ ಮಗಳೇ ಇಂತಹ ದುಃಷ್ಕೃತ್ಯಕ್ಕೆ ಬಲಿಯಾಗಿರುವಳೆಂಬಂತೆ ತಿಳಿದು ಜನ ಜಮಾಯಿಸಿದ್ದರು. ಇಂತಹ ಪ್ರತಿಭಟನೆ ನಡೆದಿದ್ದು ಉತ್ತರ ಕನ್ನಡದಲ್ಲಿ ಮೊದಲು ಎಂಬಂತೆ. ನನಗೆ ಪರಿಚಯವಿರುವಂತೆ ವತ್ಸಲಾ ಚುರುಕು ಮತಿಯ, ಮೃದು ಸ್ವಭಾವದ ಮುಗ್ಧ ಹುಡುಗಿ. ಅವಳಕ್ಕ ಜಯ ಕೂಡ ಹಾಗೆ, ಮಾತಾಡಿದರೆ ಮುತ್ತಿನಂತೆ. ಅಷ್ಟೊಂದು ನಯ, ನಾಜೂಕು ಮೈತುಂಬಿಕೊಂಡ ವತ್ಸಲಾ ಕೊಲೆಯಾಗಿದ್ದು ಮಾತ್ರ ನಂಬಲು ಸಾಧ್ಯವಾಗದ ಮತ್ತು ಅಷ್ಟೇ ಆತಂಕ ಹುಟ್ಟಿಸುವ ಸಂಗತಿ. ಹಳ್ಳಿಗಳಲ್ಲಿ ಎಲ್ಲಾ ಹೆಣ್ಮಕ್ಕಳು ನಿರ್ಭಯವಾಗಿ ಸಂಚರಿಸಬಲ್ಲ ಕಾಲವೊಂದಿತ್ತು.
ಬೆಟ್ಟ ಗುಡ್ಡ ಅಲೆದಾಡುತ್ತ, ಬೊಗಸೆ ತುಂಬ ನೇರಲ ಹಣ್ಣು, ಲಂಗದ ಕಿಸೆಯಲ್ಲಿ ನೆಲ್ಲಿಕಾಯಿ, ಬಿಕ್ಕೆಹಣ್ಣು, ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಮುಳ್ಳೇಹಣ್ಣು, ನುರುಕಲು ಹಣ್ಣು ಹೀಗೆ.. ಗುಂಪಾಗಿ, ಒಂಟಿಯಾಗಿ ಎಲ್ಲೆಂದರಲ್ಲಿ ಅಲೆದಾಡಿ ಹಣ್ಣುಗಳನ್ನು ಕೊಯ್ದು ಗುಡ್ಡೆ ಹಾಕುವ ಕಾಲವೊಂದಿತ್ತು. ಈಗ ಗುಡ್ಡ ಅಲೆದಾಡಿ ಹಣ್ಣು ಕೊಯ್ದು ತಿನ್ನುವುದಿರಲಿ, ಒಂಟಿಯಾಗಿ ಶಾಲಾ-ಕಾಲೇಜಿಗೆ ತಿರುಗುವಂತೆಯೂ ಇಲ್ಲ. ಮಕ್ಕಳು ಮನೆಗೆ ಬರುವವರೆಗೆ ನೆಮ್ಮದಿಯಿಂದ ಇರುವಂತೆಯೇ ಇಲ್ಲ. ಮಕ್ಕಳು ಮನೆಗೆ ಬಂದ ಮೇಲೆ ಸಮಾಧಾನ ಪಟ್ಟುಕೊಳ್ಳಬೇಕು. ಎಂತಕಾಲ ನೋಡಿ, ಸುಶಿಕ್ಷಿತ ಸಮಾಜ ಹೆಚ್ಚಾದಂತೆ ವಿಕೃತ ಜನರೂ ಜಾಸ್ತಿಯಾಗ ಹತ್ತಿದ್ದಾರೆ. ಹಾಗಾಗಿ ಹೆಣ್ಮಕ್ಕಳ ಬಗ್ಗೆ ಕಾಳಜಿ, ರಕ್ಷಣೆ ಅತೀ ಅವಶ್ಯಕವಾಗಿದೆ. ಉತ್ತರಕನ್ನಡದಲ್ಲಿ ಹೆಣ್ಮಕ್ಕಳನ್ನು ಮಾರುವ, ವೇಶ್ಯಾವಾಟಿಕೆಗಿಳಿಸುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಸಮಾಜ ಮುಖಿ ಪತ್ರಿಕೆಯಲ್ಲಿ, ಕರಾವಳಿ ಮುಂಜಾವಿನಲ್ಲಿ, ವಿಜಯ ಕರ್ನಾಟಕದಲ್ಲೂ ಅಲ್ಪಸ್ವಲ್ಪ ಪ್ರಕಟವಾಗಿತ್ತು. ಆದರೇನಂತೆ ಪೋಲೀಸ್ ಇಲಾಖೆ ಎಚ್ಚೆತ್ತು ಕೊಳ್ಳಲಿಲ್ಲ. ಕಳ್ಳದಂಧೆ ನಡೆಸುವವರನ್ನ ಹಿಡಿಯುವುದಿರಲಿ ತನಿಖೆಯೇ ಮಾಡಿಲ್ಲ. ಯಾಕೋ ವತ್ಸಲಾ ಹೆಗಡೆಯ ಕೊಲೆ ಪ್ರಕರಣದಲ್ಲಿ ಪೋಲೀಸ್ ಇಲಾಖೆಗೆ ಜೀವವಿದೆಯೆಂದು ತೋರಿಸಲು ಚುರುಕಿನಿಂದ ತನಿಖೆ ನಡೆಯುತ್ತಿದೆ. ಜನರ ಆಕ್ರೋಶ ತಣ್ಣಗಾಗುವವರೆಗೂ ನಡೆಯುತ್ತಲೇ ಇರುತ್ತದೆ. ಆ ಮೇಲೆ ಅದೂ ಮಲಗಿ ಬಿಡುತ್ತದೆ. ಭಕ್ಷೀಸು ಪಡೆದ ಮೇಲೆ ಪ್ರಕರಣ ಮುಚ್ಚಿ ಹೋಗುವುದು ಎಷ್ಟರ ಮಾತು. ಒಂದೊಂದೂ ಅತ್ಯಾಚಾರ, ಕೊಲೆಯ ಪ್ರಕರಣ ಕೇಳಿದಾಗಲೂ ಮನಸು ಆತಂಕಕ್ಕೆ ಬೀಳುತ್ತದೆ. ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಗರಿಷ್ಠ ಮಟ್ಟದಾಗಿದ್ದರೆ ಭಯವಾದರೂ ಇರುತ್ತಿತ್ತೋ ಏನೋ. ಅಮಾನುಷವಾಗಿ ಕೊಲೆಗೈದ ಅಪರಾಧಿಗಳಿಗೆ ಸಾವೆಂದರೆ ಏನು? ಅದರ ಯಾತನೆ ಏನು? ಇಂಚು ಇಂಚಾಗಿ ತಿಳಿಸಿ ಗಲ್ಲಿಗೇರಿಸಬೇಕು. ಆ ತಾಯಿಯ ದುಃಖದ ಕಟ್ಟೆಯೊಡೆದು ಗಳಗಳನೆ ಅತ್ತಿದ್ದನ್ನ ನೋಡಿದ್ದ ನಮಗೆ ಎಷ್ಟು ಆಕ್ರೋಶ ಮನೆ ಮಾಡಿತ್ತೆಂದರೆ, ಕೊಲೆಗಡುಕ ಸಿಕ್ಕರೆ ಆತನನ್ನು ಎಲ್ಲರೆದುರೇ ಚಚ್ಚಿ ಚಚ್ಚಿ ಸಾಯಿಸೋಣ ಅನ್ನಿಸುವಷ್ಟು. ದುಷ್ಟರಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ವತ್ಸಲಾಳ ದಾರುಣ ಸಾವು ಎಂತವರನ್ನೂ ಘಾಸಿಗೊಳಿಸುತ್ತದೆ. ಆಕೆಯ ತಾಯಿಗೆ ಹೇಗಾಗಿರೆ ಬೇಡ. ಅವಳ ದುಃಖವನ್ನು ಮರೆಸುವರಾರು?. ಶಿರಸಿಯಲ್ಲಿ ವತ್ಸಲಾ ಸಾವಿಗೆ ನ್ಯಾಯ ಸಿಗಬೇಕೆಂದು ಸಾವಿರಾರು ಜನ ಮೆರವಣಿಗೆಯಲ್ಲಿ ಸೇರಿದ್ದು, ಒಕ್ಕೊರಲಿನಿಂದ ಕೂಗಿದ್ದು ಪ್ರತಿಧ್ವನಿಸಿತು.
ಇಲಾಖೆ ವ್ಯವಸ್ಥಿತವಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದುರುಳರನ್ನ ಶಿಕ್ಷಿಸುವುದೇ? ವತ್ಸಲಾ ಕುಟುಂಬದವರಿಗೆ ನ್ಯಾಯ ದೊರಕೀತೆ? ಎಷ್ಟು ದಿನ ಕಾಯಬೇಕಾಗಬಹುದು? ಇನ್ನೊಂದು ಅಪರಾಧ ನಡೆವವರೆಗೂ? ಎಲ್ಲ ಹಳ್ಳಿಯ ಯುವ ಸಂಘಟನೆಗಳು ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿ ಅರಿಯಬೇಕಾಗಿದೆ. ಇಂದು ವತ್ಸಲಾ, ನಾಳೆ ಇನ್ನೊಬ್ಬಳು. ಹೀಗಾಗುವುದಕ್ಕೂ ಮೊದಲು ಊರ ಜನರಿಗೆ ತಮ್ಮೂರ ಸಹೋದರಿಯರ ರಕ್ಷಣೆ ಊರಿನ ಸಮಸ್ತ ಜನರ ಜವಾಬ್ದಾರಿಯಾಗಬೇಕು. ಕಾನೂನು ನೆಚ್ಚಿಕೂರದೆ ನಾವು, ನಾವೇ ಜಾಗ್ರತರಾಗಿ ಇನ್ನೊಬ್ಬ ವತ್ಸಲಳಂತೆ ಆಗಬಾರದೆಂಬ ಸಂಕಲ್ಪ ಈಗಿನಿಂದಲೇ ತೊಡಬೇಕು. ಹಾಗೇ ಮಾಡಿದಲ್ಲಿ ಸಾತ್ವಿಕ ಸಮಾಜವನ್ನು ರೂಢಿಸುವಲ್ಲಿ ನಮ್ಮ ಪಾತ್ರ ಹಿರಿದಾಗುತ್ತದೆ. ಆಗಲಾದರೂ ವತ್ಸಲಾಳ ಆತ್ಮಕ್ಕೆ ಶಾಂತಿ ಸಿಗಬಹುದು. ಶಶಿಕಲಕ್ಕನ ಕಂಬನಿಗೆ ಇದು ಪ್ರತಿಕ್ರಿಯೆಯೂ ಆಗಬಹುದು. ನೂರಾರು ತಾಯಂದಿರ ಮನದ ಭಾರವೂ ಕಡಿಮೆಯಾಗಬಹುದು. ನಮ್ಮ ಹಳ್ಳಿಗಳ ಸ್ವಾಸ್ಥ್ಯ ನಮ್ಮ ಜವಾಬ್ದಾರಿ. ಈಗಲಾದರೂ ಎಚ್ಚೆತ್ತು ಕೊಳ್ಳೋಣ. ಆ ತಾಯಿಯ ಕಣ್ಣೀರಲ್ಲಿ ಭಾಗಿಯಾಗೋಣ.