ಮನಸು ಮನಸುಗಳ ಚುಕ್ಕಿಗಳ ಚಿತ್ತಾರ
September 15th, 2008.
– ಎನ್.ಆರ್. ರೂಪಶ್ರೀ, ಮೈಸೂರು
ಮನಸ್ಸೇಕೋ ಮೌನವಾಗಿದೆ. ಮನದಲ್ಲಿನ ಭಾವನೆಗಳನ್ನು ಹೇಳಲಾಗದೆ ಒದ್ದಾಡುತ್ತಿದ್ದೇನೆ. ಈಪರಿಯ ವೇದನೆ, ಸಂಕಟಗಳ ಜೊತೆ ಬದುಕುವದಾದರೂ ಹೇಗೆ? ಆಘಾತಗಳು ಒಂದರ ಮೇಲೊಂದರಂತೆಬರುತ್ತಿವೆ. ಯಾರ ಹತ್ತಿರವೂ ಮುಖಕೊಟ್ಟು ಮಾತನಾಡದ ಸ್ಥಿತಿ, ಏನಾಗಿದೆ ಈ ಹೃದಯಕ್ಕೆ? ಬಡಿತದಪ್ರತಿ ನಿಮಿಷವೂ ಕನ್ನಡಿಯ ಪ್ರತಿಬಿಂಬವೇ. ಆದರೂ ಅಗಣಿತ ತಾರೆಗಳ ನಡುವೆ ನಿಂತ ನಿರಾಳತೆಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಅಂತರ್ಮುಖಿಯಾಗುತ್ತಿರುವ ಬದುಕಿಗೆ ಆಸರೆಯಾದರೂ ಯಾವುದು?ಎಲ್ಲ ಬಿಟ್ಟು ಹೊರಡುವ ಹುನ್ನಾರದಲ್ಲಿದ್ದಾಗ ಕಟ್ಟಿಕೊಂಡ ಬಂಧನ. ಬಿಡುಗಡೆ ಹೇಗಾದೀತು? ನಿನ್ನಯಾವ ಪ್ರಶ್ನೆಗಳಿಗೂ ಉತ್ತರ ಕೊಡಲಾಗದೆ ಒಗಟಿನ ಸ್ಥಿತಿಯಲ್ಲಿದ್ದೇನೆ. ನಿನ್ನ ಕನಸು, ಮನಸು ಎಲ್ಲವೂತಿಳಿದಿದ್ದರೂ ಸ್ಪಂದಿಸಲಾಗದ ಹಸಿವಿನಲ್ಲಿದ್ದೇನೆ. ಹೇಳ ಹೊರಟರು ಹೇಳಲಾಗದೆ ಕೇಳ ಹೊರಟರುಕೇಳಲಾಗದೆ, ಕಮರಿ ಹೋಗುತ್ತೇನೆ ಎನ್ನುವ ಆತಂಕವೂ ಇದೆ. ಈ ಭಯ, ಹೋರಾಟ, ತುಮುಲ ಇನ್ನೆಷ್ಟು ದಿನ? ಕೊನೆಯೇ ಇಲ್ಲದ ಕಾದಾಟಕ್ಕೆ ಆರಂಭವಿದೆಯೇ? ಭಾವನೆಗಳೂ ಕೊಂಡು ಕೊಳ್ಳುವ ವ್ಯವಹಾರವಾದರೆ ಮತ್ತೆ ಯಾವ ವ್ಯಾಪಾರ ಉಳಿಯಲು ಸಾಧ್ಯ?
ಬುದ್ಧಿಯ ಜೊತೆಗೆ ಬದುಕುವ ಶಕ್ತಿ ನನಗಿಲ್ಲ. ನಾನು ನನ್ನಷ್ಟಕ್ಕೆ ಇದ್ದು ಅಲೆಗಳ ಏರಿಳಿತಗಳ ನಡುವೆ ಜೀಕುತ್ತಲೇ ಇರುತ್ತೇನೆ. ಅಲ್ಲಿ ಯಾರೂ ಇಲ್ಲ. ಆದರೆ ಎಲ್ಲರೂ ಇದ್ದಾರೆ. ಅಮೂರ್ತದೊಳಗಿನ ಮೂರ್ತದಂತೆ. ನಿನ್ನ ನೋವಿನ ಮೇಲೆ ನಗುವ ಕಸರತ್ತಲ್ಲ. ಹತ್ತಿರವಾದದ್ದೆಲ್ಲ ದೂರವಾಗುತ್ತಿದೆ. ದೂರವಾದದ್ದೆಲ್ಲ ಹತ್ತಿರವಾಗುತ್ತಿದೆ. ಇಲ್ಲಿ, ಬೇಕು ಬೇಡಗಳ ಬಡಿವಾರಗಳು ಬೆಳಗುತ್ತಲೇ ಇವೆ. ವೈಯಕ್ತಿಕ ಕನಸು, ಯೋಚನೆಗಳು ಸಾರ್ವತ್ರಿಕವಾದರೆ ಏನಾಗುತ್ತದೆ? ಸರ್ಕಾರಿ ಸಾರ್ವಜನಿಕ ಯೋಜನೆ ಆಗುತ್ತದೆ ಅಷ್ಟೇ. ಗುರುತಿಸಲಾಗದ ಪ್ರೀತಿ, ಅರ್ಥೈಸಿಕೊಳ್ಳಲಾಗದ ಅಂಕಗಳು. ಹೊಯ್ದಾಟದ ಹೊನ್ನರಿಕೆಗೆ ಹೂವ ಮುಡಿಸಲು ಸಾಧ್ಯವೇ? ಎಲ್ಲವನ್ನು ಬಡಬಡಿಸಬೇಕು ಎನ್ನುವ ಧಾವಂತದಲ್ಲಿ ಏನನ್ನು ಹೇಳಲಾಗದ ದಯನೀಯ ಸ್ಥಿತಿಯಲ್ಲಿದ್ದೇನೆ. ಮನಸ್ಸು, ಮನಸ್ಸಿನ ಜೊತೆ ಮೀಯುವ ನನಗೆ ನಿನ್ನ ಮನಸ್ಸು ಅರ್ಥವಾಗುವದಿಲ್ಲವೇ? ಆದರೂ ನಿರಾತಂಕ, ನಿರ್ಲಿಪ್ತವಾಗಿದ್ದೇನೆ. ತಪ್ಪನ್ನು ತಪ್ಪು ಎಂದು ಹೇಳುವ ಎದೆಗಾರಿಕೆಯೂ ಇಲ್ಲದ ಬದುಕು ಯಾಕಾಗಿ? ಯಾರಿಗಾಗಿ? ಭಾವುಕ ಬಾಳಿನ ಬಿದಿರು ಮಳೆಗಾಲದಲ್ಲಿಯೇ ಚಿಗುರಲಾರದ ಕನವರಿಕೆಯಲ್ಲಿದೆ. ಪರಿಸ್ಥಿತಿಗೆ ಮುಖ ಮಾಡಿ, ದಾರಿಗುಂಟ ಹೆಜ್ಜೆ ಹಾಕುವ ಹಂಬಲಿಕೆ. ಆದರೂ ಸೋತ ಕಾಲು ಇದ್ದಲ್ಲಿಯೇ ಹೂತು ಹೋಗಿದೆ. ನಿನ್ನ ಕಂಡ ಕ್ಷಣ ಯಾಕೆ ಸ್ತಬ್ಧವಾಗುತ್ತೇನೆ. ಮೂಕವಾಗುತ್ತೇನೆ? ಬಹುಶಃ ಹೊಸದಾದ ಹಸಿವನ್ನು ಅರಗಿಸಿಕೊಳ್ಳಲಾಗದ ಅನವರತ ಆತಂಕ. ಮೌನದೊಳಗಿನ ಮಾತಿದು. ಯಾರಿಗೆ ಅರ್ಥವಾಗುತ್ತದೆ? ಮಾತೇ ತಿಳಿಯದ ಇಂದಿನ ದಿನಗಳಲ್ಲಿ ಮೌನ ತಿಳಿಯುತ್ತದೆಯೇ? ವ್ಯವಧಾನ ಪುರುಸೊತ್ತು ಇಂದು ಯಾರಿಗೆ ಇದೆ. ಎಲ್ಲರೂ ಅವರವರ ಯೋಚನೆಯ ದಾಟಿಯಲ್ಲಿಯೇ ಬದುಕುತ್ತಾರೆ. ಪರಂಪರೆಯ ಪಳಯುಳಿಕೆಗಳು ಮೊಳಕೆ ಒಡೆಯುವುದಿಲ್ಲ. ವಸ್ತು ಸಂಗ್ರಹಾಲಯದಲ್ಲಿನ ಸಂಗ್ರಹಕಷ್ಟೇ ಸೀಮಿತ ಮೊನ್ನೆಯ ಭೇಟಿಯೊಳಗಿನ ಬಾಂಧವ್ಯ ಇವತ್ತು ಕಳಚಿದೆ. ಮನಸ್ಸು ಏನನ್ನೂ ಹೇಳಲಾಗದ, ಕೇಳಲಾಗದ, ಸಹಿಸಲಾಗದ ಸ್ಥಿತಿಯಲ್ಲಿದೆ. ನಿನ್ನ ಭಾವನೆಗಳೊಂದೂ ನನ್ನ ಹೃದಯದಲಿ ಇಳಿಯಲೇ ಇಲ್ಲ. ಅಥವಾ ನೀನು ಇಳಿಸಲಿಲ್ಲವೋ? ಕೋಪ, ದ್ವೇಷ, ಸಹನೆ, ನಗು ಯಾವುದೂ ಇಲ್ಲದ ನನ್ನ ಗುಣ ಏನಾಗುತ್ತಿದೆ? ನಿರ್ಗುಣನಾ-?
ನೆನೆಸಿಕೊಂಡರೆ ಮತ್ತೆ ಮತ್ತೆ ಅನಂತದೆಡೆಗೆ ಸಾಗುತ್ತೇನೆ. ಸಾಗಾಟದಲ್ಲಿ ಸಂಸಾರದ ಸರಿಗಮ. ತಾಳ ಲಯ ಎಲ್ಲ ತಪ್ಪುತ್ತಿದೆ. ಆದರೂ ಮನಸ್ಸಿನ ವಿರುದ್ಧ ಈಜುವುದು ಸಾಧ್ಯವಿಲ್ಲ. ಭಾವನೆಗಳ ಜೊತೆಯೇ ಬದುಕುವ ನನಗೆ ವಿಚಾರಗಳ ಪ್ರಚೋದನೆಗೆ ಸಿಲುಕುವ ಅಗತ್ಯವಿಲ್ಲ. ಹಾಗಂದುಕೊಂಡಿದ್ದೇನೋ? ಗೊತ್ತಿಲ್ಲಗಳ ನಡುವೆ ಗಿಜರಾಯುತ್ತಿದ್ದೇನೆ. ಪ್ರೀತಿಯ ಇನ್ನೊಂದು ಮಗ್ಗುಲನ್ನ ದಾಟುವ ಯತ್ನದಲ್ಲಿದ್ದೇನೆ. ಹಿಡಿದಿಡಬಲ್ಲೆಯಾ..? ನಿನ್ನಲ್ಲಿನ ಪ್ರೀತಿಯ ಪನ್ನೀರಿನೊಂದಿಗೆ. ಸಂಘರ್ಷದ ಸಂಧಾನದಲಿ ಯಾರು ಯಾರ ಪರ. ಇಲ್ಲಿ ಸೋಲೇ ಗೆಲುವೋ…? ಸೋತರೂ ಗೆಲುವಿನ ಮೆಟ್ಟಿಲೇ? ಅಥವಾ ಗೆದ್ದರೂ ಅದು ಸೋಲಿನ ಇನ್ನೊಂದು ಮುಖವೋ? ಗೊತ್ತಾಗುತ್ತಿಲ್ಲ. ಪದಗಳ ಜೊತೆ ಆಟ ಆಡುವ ನೀನು, ವ್ಯಾಖ್ಯಾನಗಳಿಗೆ ವ್ಯಾಖ್ಯಾನವಾಗುವ ನೀನು, ಹೃದಯದ ತಲ್ಲಣಗಳಿಗೆ ತಂಗಾಳಿ ಆಗೋದು ಯಾವಾಗ? ಎಲ್ಲರ ಎದುರಿಗೆ ನನ್ನನ್ನ ದೂರೀಕರಿಸಿ ಕೊನೆಯಲ್ಲಿ ಕರೆಯುವ ನಿನ್ನ ಕೋರಿಕೆಗೆ ನಾನು ಹೇಗೆ ಸ್ಪಂದಿಸಲಿ? ಅಷ್ಟೊತ್ತಿಗೆ ನನ್ನ ಭಾವನೆಗಳೆಲ್ಲ ಬತ್ತಿ ಹೋಗಿರುತ್ತವೆ. ಜೀವವಿಲ್ಲದ ನಿರ್ಜೀವವಾಗಿರುತ್ತೇನೆ. ಹೇಳು ಹೇಳುತ್ತಲೇ, ನಿಲ್ಲಿಸುವ ನನ್ನ ಅರ್ಥವಂತಿಕೆಯ ಅರ್ಧ ಮಾತುಗಳನ್ನು ಪೂರ್ತಿ ಮಾಡುವ ಶಕ್ತಿ ಯಾರಿಗೂ ಇಲ್ಲ. ಇನ್ನರ್ಧದ ಹುಡುಕಾಟದಲ್ಲಿದ್ದೇನೆ. ಅದು ಸಿಗಬಹುದಾ? ಪರಿಪೂರ್ಣತೆಯ ಪೂರ್ಣತ್ವ ದೊರೆಯಬಹುದಾ? ಕೊನೆಗೂ ಮರೀಚಿಕೆಯೇ ಆಗಿ ಉಳಿಯುತ್ತದೆಯಾ..?
ಗೆಳೆಯರ ಬಳಗದ ಮಧ್ಯೆ ಕರಗುವ ನೀನು ನನ್ನ ಕಂಗಳಿನ ಕನಸನ್ನ ತಿಳಿಯುವ ಯತ್ನವನ್ನೆ ಮಾಡಿಲ್ಲ. ಎದುರು ಎದುರಿಗಿನ ನೋಟಗಳೆಲ್ಲ ನಿರ್ಭಾವುಕವಾಗಿ, ನಿತ್ರಾಣವಾಗಿದೆ. ಯಾವ ಕಸುವೂ ಕನಸು ಉಳಿದಿಲ್ಲ. ಆದರೂ ಆಸೆಯ ಪರ್ವತವನ್ನೇರಿ ಪಲ್ಲಂಗದ ಪಲ್ಲವಿ ನುಡಿಸುವ ಯತ್ನದಲ್ಲಿದ್ದೇನೆ. ಶೃತಿ ಮೀಟಿ ನಾದ ಹೊಮ್ಮಬಲ್ಲದೇ? ಅಥವಾ ಎಲ್ಲವೂ ನಿನಾದವಾಗಿ ಗಾಳಿಯಲ್ಲಿ ತೇಲಿ ಹೋಗಬಹುದೇ? ಕಣ ಕಣದ ಅಣು ಅಣುವಿನಲ್ಲಿ ಬಿಂದುವಾಗಿ ಸಿಂಧುವಾಗುತ್ತಿದ್ದೇನೆ. ಹರಿಯುವ ನೀರಿನ ಪ್ರತಿ ದಾರಿಯಲ್ಲಿ ಹಸಿರು ಕಾಣುತ್ತಾ, ಅಸ್ತಂಗತವಾಗುವ ಸೂರ್ಯ ಮತ್ತೆ ಹುಟ್ಟುತ್ತಾನೆನ್ನುವ ನಂಬಿಕೆಯಲ್ಲಿ ದಿನ ಎಣಿಸುತ್ತಿದ್ದೇನೆ. ಸೂರ್ಯ ಕಿರಣ ಹೊಂಬೆಳಕಾಗಿ ಹೊರ ಹೊಮ್ಮಲಿ. ಅಲ್ಲಿ ನೀನು ನನ್ನ ಭಾವನೆಗಳನ್ನು ಅರಿತು ಹೆಜ್ಜೆ ಇಡುತ್ತೀಯಾ ಎನ್ನುವುದು ಮನಸಿನ ಪುಳಕ. ಬರುತ್ತೀಯಲ್ಲಾ…
ನಾಳೆ ಬರುವ ನಿಡಿದಾದ ಉಸಿರಿನೊಂದಿಗೆ. ತಂಪಾದ ತಂಗಾಳಿಯೊಂದಿಗೆ, ಎಲೆಗಳ ನಡುವಿನ ಚಟಪಟ ಸದ್ದಿನೊಂದಿಗೆ, ಹಕ್ಕಿಗಳ ಕಲರವಗಳ ಕಕ್ಕುಲತೆಯೊಂದಿಗೆ.
ಪ್ರೀತಿ ಪರ್ವ ಪಡುವಣದ ಹೆಜ್ಜೆ ಗುರುತಿಗಾಗಿ ಕಾಯುತ್ತಿದೆ.
ಮೂಡಿಸುವ ಮುನ್ನುಡಿ ನಿನ್ನದು.
ಮೂಡಿಸುತ್ತೀಯಲ್ಲಾ — ಬದುಕಿನ ಪುಟಗಳಲ್ಲಿ ಪುಟದ ತುಂಬಾ ಪುಟ್ಟ ಸಾಲುಗಳನ್ನು.
ಅಲ್ಲಿನ ಚಿಹ್ನೆಗಳೆಲ್ಲ ನನ್ನದೇ ಜೀವನದ ಚುಕ್ಕಿ ಚಿತ್ತಾರಗಳ ನಡುವಿನ ಚೀತ್ಕಾರಗಳು !
January 13th, 2011 at 10:27 pm
I am always apriciate like this writings. Thank you rupashree, continue………………
Best regards from my end.
January 13th, 2011 at 10:29 pm
I am always apriciate like this writings, Thank you rupashree, please continue like this writings.
Best regards from my end.
Shivu
January 20th, 2014 at 6:52 pm
i like it
February 6th, 2017 at 9:58 am
Beatiful way of revealing one’s feelings which r beyond expression…..I love the wordings….