• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಚೈತ್ರರಶ್ಮಿ ನಮಸ್ತೆ,


  ಸೃಜನಶೀಲತೆಯ ಹುಡುಕಾಟದ ಮಾಸಿಕ ಪತ್ರಿಕೆ ’ಚೈತ್ರರಶ್ಮಿ’ಯ ಭಾವಯಾನಕ್ಕೆ ನಿಮಗೆ ಪ್ರೀತಿಪೂರ್ವಕ ಸ್ವಾಗತ. ’ಚೈತ್ರ’ ವೆಂದರೆ ಹೊಸ ಹುರುಪು, ’ರಶ್ಮಿ’ಯೇ ಬೆಳಕು. ಬದುಕಿನ ವಾಸ್ತವದಲ್ಲಿ ಕಳೆದುಹೋದ ಮನಸ್ಸಿನಲ್ಲಿ ಹೊಸ ಹುರುಪು ತುಂಬಿ ಚೈತನ್ಯದಾಯಕ ಬೆಳಕಿನೆಡೆಗೆ ಕರೆದೊಯ್ಯಬಲ್ಲ ಒಂದು ’RAY OF HOPE’ ನಮ್ಮದಾಗಬೇಕು ಎಂಬುದು ಚೈತ್ರರಶ್ಮಿಯ ಆಶಯ. ಹಳ್ಳಿಮನೆಗಳಲ್ಲಿ ಪ್ರತಿಭೆಯಿದ್ದೂ ಅವಕಾಶಗಳಿಲ್ಲದೆ ಕಳೆದುಹೋದ, ಬರೆಯಲು ಹಿಂಜರಿದು ಬರೆಯೋದು ಮರೆತ, ಬದುಕಿನ ಜಂಜಡದಲ್ಲಿ ಸಾಹಿತ್ಯದ ಸೆಲೆಯಿಂದ ದೂರಾದ ಎಲ್ಲ ಎಲೆಮರೆಯಕಾಯಂತಹ ಕವಿಮನಸ್ಸುಗಳನ್ನು ಸೃಜನಶೀಲತೆಯ ಹುಡುಕಾಟದ ಭಾವಯಾನದಲ್ಲಿ ಕರೆದೊಯ್ಯಬೇಕೆಂಬುದು ಚೈತ್ರರಶ್ಮಿಯ ಕನಸು.


  ’ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂದು ವರ್ಣಿಸುತ್ತಾನೆ ಕವಿ. ’ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ’-ಅಂತ ಅಂದು ಹಳ್ಳಿಮನೆಯ ತಾಯೊಬ್ಬಳು ಹಾಡಿದ ಭೂಮಿಗೀತೆ ಇವತ್ತಿಗೂ ಪ್ರಸ್ತುತ ಅಲ್ವಾ?. ಅಂತಹ ಅತ್ಯುತ್ಕೃಷ್ಟ ಜನಪದ ಸಾಹಿತ್ಯ ಹುಟ್ಟಿದ್ದು ಹಳ್ಳಿಮನೆಯ ಅಂಗಳದಲ್ಲೇ ತಾನೇ?. ಆದರೆ ನಮ್ಮ ’ಹಳ್ಳಿಗಮಾರರು’ ಎಂಬ ಪೂರ್ವಾಗ್ರಹ ಪೀಡಿತ ಮನೋಭಾವದಿಂದ ಇವತ್ತು ಹಳ್ಳಿಮನೆಯ ಅದೆಷ್ಟೋ ಪ್ರತಿಭಾವಂತರು ಎಲೆಮರೆಯ ಕಾಯಾಗಿ ಮುದುಡಿಹೋಗಿದ್ದಾರೆ. ಆಧುನಿಕತೆಯ ಅಬ್ಬರದ ಮಧ್ಯೆ, ಒಂದಷ್ಟು ಓದಿಕೊಂಡ ಮಾತ್ರಕ್ಕೆ ’ಸಾಹಿತ್ಯ ಸ್ವಂತ ಆಸ್ತಿ’ ಅಂತ ವರ್ತಿಸುವವರ ನಡುವೆ ಹಳ್ಳಿಯೂರಿನ ಸಾಮಾನ್ಯ ಪ್ರತಿಭೆಗಳು ಪೈಪೋಟಿ ನೀಡಲಾಗದೆ ಕಳೆದುಹೋಗುತ್ತಿದ್ದಾರೆ. ನಿಜ, ಅವರೆಲ್ಲರೂ ಉತ್ಕೃಷ್ಟ ಸಾಹಿತ್ಯ ಬರೆದುಬಿಡುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ ಅವರಿಗೆ ಅವಕಾಶವನ್ನೇ ಕೊಡದೆ ಅತಿಶಯವನ್ನು ನಿರೀಕ್ಷಿಸುವುದು ಎಷ್ಟು ಸರಿ ಹೇಳಿ?. ಹಾಗಾಗಿ ಚೈತ್ರರಶ್ಮಿ ಅಂತಹ ಪ್ರತಿಭಾವಂತರಿಗೊಂದು ವೇದಿಕೆಯನ್ನು ಒದಗಿಸುವ, ಆ ಮೂಲಕ ಹಳ್ಳಿ ಮನೆಗಳಲ್ಲಿ ಸದ್ದಿಲ್ಲದೆ ಮರೆಯಾಗುತ್ತಿರುವ ಸಾಹಿತ್ಯದ ಸವಿಯನ್ನು ಸವಿಯುವ ಸಂಕಲ್ಪದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಸೃಜನಶೀಲತೆಯ ಹುಡುಕಾಟದಲ್ಲಿ ಮುನ್ನಡೆದಿದೆ.


  ಇನ್ನು ನನ್ನಂತಹವರು ಬೆಂಗಳೂರೆಂಬ ಕಾಂಕ್ರೀಟ್ ಕಾಡಿಗೆ ಬಂದ ಮೇಲೆ ಅತ್ತ ಹಳ್ಳಿ ಮನಸ್ಥಿತಿಯನ್ನೂ ಉಳಿಸಿಕೊಳ್ಳಲಾಗದೆ, ಇತ್ತ ಆಧುನಿಕತೆಯ ಅಬ್ಬರದಲ್ಲೂ ಉಳಿಯಲಾಗದೆ ಒದ್ದಾಡುತ್ತೇವೆ. ಇಲ್ಲಿನ ಓಡುವ ಬದುಕಿನ ಜಂಜಡದಲ್ಲಿ ನಮ್ಮೊಳಗಿನ ಭಾವನೆಗಳು, ಸಾಹಿತ್ಯ ಪ್ರೀತಿ ಎಲ್ಲವೂ ಮಸುಕಾಗುತ್ತ ಬರುತ್ತದೆ. ಹಾಗೆ ಬರೆಯೋದು ಮರೆತವರನ್ನು ಮತ್ತೆ ಸೃಜನಶೀಲತೆಯೆಡೆಗೆ ಕರದೊಯ್ಯುವ ಆಶಯ ನಮ್ಮದು. ಜೊತೆಗೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು, ನಮ್ಮ ನಡುವಿನ ಆದರ್ಶಗಳನ್ನು, ಸಾಹಿತ್ಯ, ಸಂಸ್ಕೃತಿ ಪರಂಪರೆಗಳ ಉತ್ಕೃಷ್ಟ ವಿಚಾರಗಳನ್ನು, ದೇಶ, ಸಮಾಜದೆಡೆಗಿನ ಕಾಳಜಿಯನ್ನು ಎಲ್ಲರಿಗೂ ತಲುಪಿಸುವ ಪುಟ್ಟ ಪ್ರಯತ್ನವನ್ನೂ ಚೈತ್ರರಶ್ಮಿ ಮಾಡುತ್ತಿದೆ. ಹೆಬ್ಬದುಕ ಒಂಟಿತನದೊಳದೇನು ಬದುಕುವೆಯೊ, ತಬ್ಬಿಕೊಳೊ ವಿಶ್ವವನು ಮಂಕುತಿಮ್ಮ’ ಎಂದರು ಡಿವಿಜಿ. ಹಾಗೆಯೇ ಬೆಳೆಯುತ್ತಾ ಹೋದಂತೆ ನಮ್ಮ ಸುತ್ತ ನಾವೇ ಕಟ್ಟಿಕೊಳ್ಳುತ್ತಿರುವ ಸ್ವಾರ್ಥದ ಗೋಡೆಗಳಿಂದಾಚೆ ಹೊರಬಂದು ಎಲ್ಲರೊಳಗೊಂದಾಗಿ, ಎಲ್ಲರಲಿ ಜೊತೆಯಾಗಿ ನಡೆಯುವ ನಮ್ಮ ಕನಸಿನ ಸೃಜನಶೀಲತೆಯ ಹುಡುಕಾಟಕ್ಕೆ ನೀವೂ ನಮ್ಮ ಜತೆಯಾಗ್ತೀರಿ ತಾನೆ?


  ಕೊನೆಯದೊಂದು ಮಾತು ’ಚೈತ್ರರಶ್ಮಿ’ ಕೇವಲ ಒಂದು ಪತ್ರಿಕೆಯಲ್ಲ. ’ನಾವು ನಮ್ಮೊಳಗೇ ನಮಗೆ ನಾವಾಗೇ ಮಾತಾಡಿಕೊಳ್ಳುವುದೇ ಚೈತ್ರರಶ್ಮಿ’. ನಮ್ಮ ಈ ಭಾವಯಾನದಲ್ಲಿ ನಿಮ್ಮದೂ ಒಂದು ಮಾತಿರಲಿ.


  ಪತ್ರಿಕೆಯ ಈ ಅಂತರ್ಜಾಲವು ಕೇವಲ ಪತ್ರಿಕೆಗಷ್ಟೇ ಸೀಮಿತವಾಗಿರದೆ, ಇನ್ನೂ ಅನೇಕ ಸಾಹಿತ್ಯ ಸಂಬಂಧಿ ಚಟುವಟಿಕೆಗಳಿಗೆ ವೇದಿಕೆಯಾಗಲಿದೆ ಎಂದು ನಮ್ಮೆಲ್ಲರ ಆಶಯ. ಸಾಹಿತ್ಯಾಸಕ್ತರು ಇದರ ಸದುಪಯೋಗವನ್ನು ಪಡೆ‌ದುಕೊಂಡು, ಯುವ ಲೇಖಕರನ್ನು ಪ್ರೋತ್ಸಾಹಿಸಬೇಕಾಗಿ ಅರಿಕೆ.


  ಚೈತ್ರರಶ್ಮಿಯ ಸೃಜನಶೀಲತೆಯ ಹುಡುಕಾಟದಲ್ಲಿ ನಿಮ್ಮೆಲ್ಲರ ಸಲಹೆ, ಸಹಕಾರ, ಮಾರ್ಗದರ್ಶನ, ಬೆಂಬಲ, ಹಾರೈಕೆಗಳ ನಿರೀಕ್ಷೆಯಲ್ಲಿ........


  ~~
  ರಾಮಚಂದ್ರ ಹೆಗಡೆ. ಸಿ.ಎಸ್.

  www.chaitrarashmi.com

  ಸಾಹಿತ್ಯ ಸಂವಾದ

 • ಸ್ನೇಹಮಿಲನ